ಮ್ಯಾಸಿಡೋನಿಯ
ನೈಋತ್ಯ ಯುರೋಪಿನ ಬಾಲ್ಕನ್ ಪರ್ಯಾಯ ದ್ವೀಪದಲ್ಲಿರುವ ಒಂದು ಪರ್ವತಮಯ ಪ್ರದೇಶ. ಏಜಿಯನ್ ಸಮುದ್ರದ ವಾಯುವ್ಯ ದಿಕ್ಕಿನ ಈ ಗ್ರೀಸ್ ಮತ್ತು ಯುಗೋಸ್ಲಾವಿಯಾ ರಾಜ್ಯಗಳಲ್ಲಿ ಹಂಚಿಹೋಗಿದೆ. ಈ ಪ್ರದೇಶದ ವಿಸ್ತೀರ್ಣ ಗ್ರೀಸ್ ರಾಜ್ಯಕ್ಕೆ ಸೇರಿದ ಭಾಗ 34.203 ಚಕಿಮೀ. ಜನಸಂಖ್ಯೆ 21,21,953 (1981). ರಾಜಧಾನಿ ಗ್ರಿವೆನಾ. ಯುಗೊಸ್ಲಾವಿಯ ಭಾಗದ್ದು 25,713 ಚಕಿಮೀ. ಜನಸಂಖ್ಯೆ 19,12,257 (1981). ರಾಜಧಾನಿ ಸ್ಕಾಪ್‍ಯೆ.

ಈ ಪ್ರದೇಶದ ಹೆಚ್ಚು ಮಂದಿ ರೈತರು, ಬಾರ್ಲಿ, ಬತ್ತ, ರೈ. ಹೊಗೆಸೊಪ್ಪು. ಗೋದಿ, ವಿವಿಧ ಬಗೆಯ ದ್ವಿದಳ ಧಾನ್ಯಗಳನ್ನೂ ಹಣ್ಣು ಮತ್ತು ತರಕಾರಿಗಳನ್ನೂ ಬೆಳೆಯುತ್ತಾರೆ. ಕುರಿ, ಮೇಕೆಗಳನ್ನು ಸಾಕುತ್ತಾರೆ. ಇದರ ಇತರೆಲ್ಲಾ ಚಟುವಟಿಕೆಗಳು ಇಂದು ಗ್ರೀಸ್ ಮತ್ತು ಯುಗೋಸ್ಲಾವಿಯಾದ ಪ್ರಗತಿಯೊಡನೆ ಸೇರಿಹೋಗಿದೆ.

ಕ್ರಿ.ಪೂ. 4 ನೆಯ ಶತಮಾನದಲ್ಲಿ ಗ್ರೀಸಿನ ಉತ್ತರಕ್ಕಿದ್ದ ಮ್ಯಾಸಿಡೋನಿಯ ಆಳುತ್ತಿದ್ದ ಎರಡನೆಯ ಫಿಲಿಪ್ (ಕ್ರಿ.ಪೂ. 359 - 336) ಮ್ಯಾಸಿಡೋನಿಯ ಸಾಮ್ರಾಜ್ಯದ ಸ್ಥಾಪಕ. ಈತ ತಮ್ಮತಮ್ಮಲ್ಲಿ ಬಡಿದಾಡುತ್ತಿದ್ದ ಗ್ರೀಕ್ ನಗರ ರಾಜ್ಯಗಳನ್ನು ಗೆದ್ದು ಗ್ರೀಸ್ ದೇಶವನ್ನು ಒಟ್ಟುಗೂಡಿಸಿ ತನ್ನ ಅಧೀನದಲ್ಲಿ ತಂದ. ಅಲ್ಲದೆ ಪರ್ಷಿಯ ಸಾಮ್ರಾಜ್ಯವನ್ನು ಗೆಲ್ಲುವ ಪೂರ್ಣ ಯೋಜನೆಯನ್ನು ತಯಾರಿಸಿದ್ದ. ಆದರೆ ಫಿಲಿಪ್ ಆಕಸ್ಮಿಕ ಮರಣಹೊಂದಿದ. ಅವನ ಶೂರಮಗ ಅಲೆಕ್ಸಾಂಡರ್ (ಕ್ರಿ.ಪೂ. 336-323) ತನ್ನ ತಂದೆಯ ಆಸೆಯನ್ನು ಪೂರ್ಣಗೊಳಿಸಿದ. ಈಜಿಪ್ಟ್, ಪರ್ಷಿಯ ಸಾಮ್ರಾಜ್ಯ ಮತ್ತು ಭಾರತದ ಪಂಜಾಬಿನವರೆಗೆ ಆಳುತ್ತಿದ್ದ ಅರಸರನ್ನು ಗೆದ್ದ. ಅಲೆಕ್ಸಾಂಡರನ ಮರಣದ ಕಾಲಕ್ಕೆ ಮ್ಯಾಸಿಡೋನಿಯ ಸಾಮ್ರಾಜ್ಯ ಗ್ರೀಸ್ ಮತ್ತು ಬಾಲ್ಕನ್ ರಾಷ್ಟ್ರಗಳು, ಏಷ್ಯಮೈನರ್, ಈಜಿಪ್ಟ್, ಸಿರಿಯ, ಪರ್ಷಿಯ ಮತ್ತು ಪಂಜಾಬಿನವರೆಗಿನ ಎಲ್ಲ ದೇಶಗಳನ್ನೊಳಗೊಂಡಿತ್ತು. ಇವನ ಮರಣದ ಅನಂತರ ಈ ಸಾಮ್ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸ್ವತಂತ್ರ ರಾಜ್ಯಗಳು ಉದಯವಾದವು. ಈ ರಾಜ್ಯಗಳ ಕೆಲವು ಅರಸರಲ್ಲಿ ಪ್ರಮುಖರಾದ ಫ್ರಿಜಿಯದ ಅರಸು ಆ್ಯಂಟಿಗೋನಸ್ ಮತ್ತು ಅವನ ಮಗ ಡೆಮೆಟ್ರಿಯಸ್, ಸಿರಿಯದ ಸಲ್ಯೂಕಸ್ ಇವರು ಮತ್ತೆ ಅವನ ಮಗ ಸಾಮ್ರಾಜ್ಯವನ್ನು ಮುಂದುವರೆಸಲು ಮಾಡಿದ ಪ್ರಯತ್ನಗಳು ನಡೆಯಲಿಲ್ಲ. ಕಡೆಗೆ ಈ ಸಾಮ್ರಾಜ್ಯದ ಬಹುಭಾಗಗಳನ್ನು ರೋಮಿನ ಸೈನ್ಯಾಧಿಕಾರಿಗಳು ಗೆದ್ದುಕೊಂಡರು. ಕ್ರಿ.ಪೂ. 64 ರಲ್ಲಿ ಸಿರಿಯ ರೋಮ್ ಸಾಮ್ರಾಜ್ಯಕ್ಕೆ ಸೇರಿತು. ಮುಂದೆ 1912 - 13 ರ ಬಾಲ್ಕನ್ ಯುದ್ಧಗಳ ಪರಿಣಾಮವಾಗಿ ಮ್ಯಾಸಿಡೋನಿಯಾ ಸರ್ಬಿಯ (ಇಂದಿನ ಯುಗೋಸ್ಲಾವಿಯಾ) ಗ್ರೀಸ್ ಮತ್ತು ಬಲ್ಗೇರಿಯ ದೇಶಗಳಲ್ಲಿ ಹಂಚಿಹೋಯಿತು. 
(ಕೆ.ವಿ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ